Untitled Document
Sign Up | Login    
ಬರವಿಗಾಗಿ ಕಾದವಳು ( ಭಾಗ - 02 )

ರಕ್ಕಸ ಕಬಂಧನ ಚಿತಾಗ್ನಿಯಿಂದ ದಿವ್ಯ ಪುರುಷನೊಬ್ಬ ಮೇಲೆದ್ದು ಬಂದ. ಅವನನ್ನು ಕರೆದೊಯ್ಯಲು ರಥವೊಂದು ಸಿದ್ಧವಾಗಿ ನಿಂತಿತ್ತು. ಅವನೇ ಶಾಪದಿಂದ ಕಬಂಧನಾಗಿದ್ದ ವಿಶ್ವಾವಸು ಎಂಬ ಗಂಧರ್ವ. ಆತ ರಾಮನೊಂದಿಗೆ ನುಡಿದ:
" ಅಣ್ಣ ವಾಲಿಯ ಭಯದಿಂದ ಋಷ್ಯಮೂಕ ಪರ್ವತದಲ್ಲಿ ಕಪಿವರ್ಯ ಸುಗ್ರೀವ ವಾಸಮಾಡಿಕೊಂಡಿದ್ದಾನೆ. ನೀನು ಅವನ ಬಳಿಗೆ ಹೋಗು. ಅವನಿಗೆ ವಾಲಿಯಿಂದ ಹೆಂಡತಿ ರಾಜ್ಯಗಳನ್ನು ಮರಳಿ ಕೊಡಿಸುವುದಕ್ಕೆ ಸಹಾಯ ಮಾಡು. ವಾನರ ವೀರರು ನಿನಗೆ ಸೀತೆಯನ್ನು ಪಡೆಯಲು ನೆರವು ನೀಡುತ್ತಾರೆ. ಪಶ್ಚಿಮಕ್ಕೆ ಹೋಗುವ ಈ ಹಾದಿಯಲ್ಲಿ ಸಾಗು. ಇದು ಋಷ್ಯಮೂಲಕ ಪರ್ವತದ ಬಳಿಯ ಪಂಪಾ ಸರೋವರಕ್ಕೆ ಕರೆದೊಯ್ಯುತ್ತದೆ. ಅಲ್ಲಿ ಮತಂಗ ಮಹರ್ಷಿಯ ಆಶ್ರಮವಿದೆ. ಕಾರಣಪುರುಷನ ಆಗಮನವನ್ನು ನಬೆಲ-ಜಲ-ಕಾಲ-ಜೀವ ಎದುರು ನೋಡುತ್ತಿರುತ್ತದೆ. ನಿನ್ನ ಒಂದು ದೇಶ ಪರ್ಯಟನ ಅನೇಕ ಮಹತ್ಕಾರ್ಯ ಸಾಧನೆಗಾಗಿಯಷ್ಟೆ” ಎಂದು ಸ್ವಲ್ಪ ನಿಂತು ಕಬಂಧ ಮುಂದುವರಿಸಿದ:
" ರಾಮ, ಅಲ್ಲಿ ಮತಂಗ ಮಹರ್ಷಿಗಳ ಶಿಷ್ಯೆ, ಬೇಡರ ಕುಲದ, ಶಬರಿಯೆಂಬ ವೃದ್ಧೆ ಇನ್ನೂ ಬದುಕಿದ್ಧಾಳೆ. ಅವಳಿಗೆ ಸ್ವರ್ಗಕ್ಕೆ ಬರುವಂತೆ ಅನೇಕ ಬಾರಿ ಆಹ್ವಾನ ಬಂದರೂ ನಿನ್ನ ದರ್ಶನ ಆಗುವವರೆಗೆ ಶ್ರದ್ಧೆ ಎಂತಹದೋ! ದಿನವೂ ನಿನಗಾಗಿ ಅಮೃತ ಸದೃಶ ಹಣ್ಣುಗಳನ್ನು ತಂದಿಟ್ಟುಕೊಂಡು, ಹೂಮಾಲೆ ಕಟ್ಟಿ, ಪೂರ್ಣ ಕುಂಭ ಇಟ್ಟು ಸ್ವಾಗತಕ್ಕೆ ಕಾದಿರುತ್ತಾಳೆ. ಎಂಥ! ತಪಸ್ವಿನಿ ! ನೀನು ಅವಳಿಗೆ ದರ್ಶನ ನೀಡು. ತುಂಬ ರಮ್ಯವಾದ ಮತಂಗವನ ಪ್ರವೇಶ. ನಿನ್ನ ಹೃದಯಕ್ಕೆ ಶಾಂತಿ ಸಾಂತ್ವನ ನೀಡುತ್ತದೆ. ಪುಣ್ಯವಂತರಲ್ಲದವರು ಋಷ್ಯಮೂಕ ಪರ್ವತವನ್ನು ಹತ್ತಲು ಸಾಧ್ಯವಿಲ್ಲ. ಅಲ್ಲಿನ ಗುಹೆಗಳಲ್ಲಿ ವಾಸಿಸುತ್ತಿರುವ ವಾನರ ವೀರರನ್ನು ಆಶ್ರಯಿಸು. ನಿಮಗೆ ಶ್ರೇಯಸ್ಸಾಗುತ್ತದೆ ಹೋಗು. ನಾನಿನ್ನು ಬರುವೆ.. ಅಪ್ಪಣೆ ಕೊಡು” ಎಂದನು.
ರಾಮ ಲಕ್ಮಣರು "ಆಗಲಿ ಹೋಗಿ ಬಾ” ಎನ್ನುತ್ತಿದ್ದಂತೆ ವಿಶ್ವಾವಸು ಗಂಧರ್ವನು ರಥವನ್ನು ಏರಿದ. ಅದು ಆಕಾಶ ಮಾರ್ಗವಾಗಿ ಹಾರಿ ಹೋಯಿತು. ಕಬಂಧನ ಮಾರ್ಗ ದರ್ಶನದಿಂದ ರಾಮ ಲಕ್ಷ್ಮಣರಿಗೆ ಸಂತೋಷವಾಯಿತು. ಆ ದಾರಿಯಲ್ಲೇ ಮುನ್ನಡೆದರು. ಋಷ್ಯಮೂಲಕ ಪರ್ವತದ ಬಳಿಯಿರುವ ಪಂಪಾಸರೋವರವನ್ನು ಇನ್ನೇನು ತಲುಪಬೇಕು ಅನ್ನುವಷ್ಟರಲ್ಲಿ ಕತ್ತಲಾಯಿತು. ರಾತ್ರಿ ಅಲ್ಲಿಯೇ ಋಷ್ಯಾಶ್ರಮವೊಂದರಲ್ಲಿ ತಂಗಿದರು. ಮಾರನೇ ದಿನ ಪ್ರಯಾಣವನ್ನು ಮುಂದುವರಿಸಿ ಕದಂಬ ಹೇಳಿದ ಮಾತಂಗವನ- ಪಂಪಾಸರೋವರವನ್ನು ತಲುಪಿದರು. ಅದರ ದಡದಲ್ಲಿ ಅನತಿದೂರದಲ್ಲಿ ಶಬರಿ ಪರ್ಣಕುಟೀರ ಕಂಡಿತು.
ಕಂಬಂಧ ಹೇಳಿದಂತೆ ಮತಂಗವನಕ್ಕೆ ಕಾಲಿಡುತ್ತಿದ್ದಂತೆ ಅವರ ಬಳಲಿಕೆ ಕಳೆಯಿತು. ಮನದ ಕಾತರ ಕಳವಳಗಳೆಲ್ಲ ಕಷಾಯ ಕುಡಿದಾಗ ಜ್ವರ ಇಳಿಯುವಂತೆ ಇಳಿದು ಹೋಯಿತು. ಸೀತೆಯ ಅನ್ವೇಷಣೆಯಲ್ಲಿ ಇದು ಯಶಸ್ಸಿನ ಮೈಲಿಗಲ್ಲು ಎಂದು ಅವರು ಭಾವಿಸಿದರು. ವೃದ್ಧೆ ಶಬರಿಯ ಆಶ್ರಮಕ್ಕೆ ಕಾಲಿಟ್ಟಾಗ ರಾಮ ಲಕ್ಷ್ಮಣರು ಆನಂದದ ಕಡಲಿನಲ್ಲಿ ತೇಲುತ್ತಿದ್ದರು.
***

ಇಂದು ಶಬರಿಯ ಮಹಾ ಭಾಗ್ಯದ ದಿನ. ಆಕೆಯ ರಾಮ ಅವಳ ಗುಡಿಸಲಿಗೆ ನಡೆದು ಬಂದಿದ್ದ. ಶತಮಾನದ ಅವಳ ಕನಸು ನನಸಾಗಿತ್ತು. ಅವಳ ಕಂಗಳಿಂದ ದಳ ದಳ ಇಳಿದ ಆನಂದಾಶ್ರು ರಾಮನ ಪಾದಗಳನ್ನು ತೋಯಿಸಿದವು. "ರಾಮ ರಾಮ ನನ್ನ ರಾಮ” ಎಂಬ ಅವಳ ಕಂಠದಿಂದ ಹೊರಟ ಧ್ವನಿ ತರಂಗ ಮತಂಗವನವನ್ನು ತುಂಬಿ ರಾಮಾಗಮನದ ವೃತ್ತಾಂತವನ್ನು ಸಾರಿತು. !
ರಾಮ ಆಕೆಯನ್ನು ಪ್ರೀತಿಯಿಂದ ಆಲಂಗಿಸಿದ. ಅವಳನ್ನು ಪಿಡಿದೆತ್ತಿ ಪಕ್ಕದಲ್ಲಿಯೇ ಕೂರಿಸಿಕೊಂಡ. ಎಷ್ಟೋ ಹೊತ್ತಿನ ತನಕ ಎಲ್ಲರೂ ಹಾಗೆಯೇ ಮೌನವಾಗಿ ಕುಳಿತಿದ್ದರು. ಭಾವೋದ್ವಿಗ್ನತೆಯಿಂದ ಯಾರಿಗೂ ಮಾತೇ ಹೊರಡಲಿಲ್ಲ. ಮೌನವೇ ಎಲ್ಲವನ್ನೂ ಹೇಳುತ್ತಿತ್ತು.
ಆಕೆಯ ಕಣ್ಣಿಂದ ಹರಿವ ಅಶ್ರುಧಾರೆ ನಿಂತು ಗುಳಿ ಬಿದ್ದ ಕೆನ್ನೆಯಲ್ಲಿ ಹನಿ ಹನಿಯಾಗಿ ಮಾಯವಾಗ ತೊಡಗಿದಾಗ ರಾಮ ಸಾಂತ್ವನದ ಅಮೃತ ಹನಿಯಂತೆ ಪ್ರೀತಿ ತುಂಬಿದ ಶಬ್ದಗಳಿಂದ ಕೇಳಿದ: " ಅಮ್ಮ, ನೀನು ಕ್ಷೇಮವಾಗಿರುವೆಯಾ? ನಿನ್ನ ವೃತಾನುಷ್ಠಾನಗಳು ಸುಸೂತ್ರವಾಗಿ ಸಾಗಿದೆಯ? ತೊಂದರೆಯೇನೂ ಇಲ್ಲವಷ್ಟೆ?
ರಾಮನ ಮಾತಿನಿಂದ ಥಟ್ಟನೆ ವಾಸ್ತವಕ್ಕೆ ಬಂದ ಶಬರಿ ಹೇಳಿದಳು : " ರಾಮ ನಿನ್ನ ಕರುಣೆಯಿಂದ ನನಗೆ ಯಾವ ತೊಂದರೆಯೂ ಆಗಿರುವುದಿಲ್ಲ. ಇದೊ ನೀವು ಬರುತ್ತೀರೆಂದು ಕಾಡಿನಿಂದ ಸಿಹಿಯಾದ ಹಣ್ಣು ಹಂಪಲುಗಳನ್ನು ಸಂಗ್ರಹಿಸಿ ತಂದಿದ್ದೇನೆ. ಸ್ವೀಕರಿಸಿ ಕೃತಾರ್ಥಳನ್ನಾಗಿ ಮಾಡಿ”
"ತಾಯಿ ಈ ಹಣ್ಣುಗಳಲ್ಲಿ ಹಲ್ಲಿನ ಗುರುತುಗಳು ಮೂಡಿವೆಯಲ್ಲ” ಲಕ್ಷ್ಣಣ ಸಂಶಯ ವ್ಯಕ್ತಪಡಿಸಿದ.
"ಪ್ರಾಣಿಯೋ ಪಕ್ಷಿಯೋ ಹಾವೊ ಕಪ್ಪೆಯೋ ಯಾವುದೂ ಕುಕ್ಕಿದುದಲ್ಲ. ನಾನೇ ಹುಳಿಯೋ ಸಿಹಿಯೋ ನೋಡಲು ಕಚ್ಚಿದೆ. ಹುಳಿಯಾದುದನ್ನು ಎಸೆದು ಸಿಹಿಯಾದುದನ್ನು ಮಾತ್ರ ಇರಿಸಿದೆ” ಎಂದಳು ಮುಗ್ಧಭಾವದಿಂದ ಶಬರಿ.
ಹುಟ್ಟಿನಿಂದ ಬೇಡತಿಯಾದರೂ ಬ್ರಾಹ್ಮೀ ಸ್ಥಿತಿಯನ್ನು ತಲುಪಿದ ಅವಳ ಎಣೆಯಿಲ್ಲದ ವಾತ್ಸಲ್ಯಕ್ಕೆ ರಾಮ ಮಂತ್ರ ಮುಗ್ಧನಾದ. ಹಣ್ಣುಗಳನ್ನು ಸವಿಯುತ್ತ " ಅಮ್ಮ, ತಪಸ್ಸಿನಿಂದ ನೀನು ಈಗಾಗಲೇ ಮುಕ್ತಿಯನ್ನು ಪಡೆದಿರುವೆ. ಕಬಂಧನಿಂದ ನಿನ್ನ ಬಗ್ಗೆ ಕೇಳಿದ ನಾನು ನಿನ್ನನ್ನು ನೋಡುವುದಕ್ಕೆ ಬಂದೆ. ನಿನ್ನನ್ನು ಕಂಡು ನಾನೂ ಧನ್ಯನಾದೆ. ಈ ಆಶ್ರಮದ ವಿಚಾರವನ್ನು ತಿಳಿಸು” ಎಂದನು.
" ರಾಮ, ಇದು ಮತಂಗವನವೆಂಬ ಪುಣ್ಯಸ್ಥಳ. ಋಷಿ ಮುನಿಗಳ ನಿರಂತರ ಯಜ್ಞ ಯಾಗಾದಿಗಳಿಂದ ಇದು ಪುನೀತವಾಗಿದೆ. ಅವರ ತಪಸ್ಸಿನಿಂದ ಪಾವನ ಕ್ಷೇತ್ರವಾಗಿದೆ. ಶಿಷ್ಯರಿಗೆ ಕಾಯಕವೇ ದೇವರು ಎಂಬುದನ್ನು ಸ್ವತಃ ಕಾಯಕ ಗೈದು ಆದರ್ಶರಾದ ಮತಂಗ ಮಹರ್ಷಿಗಳು ನನ್ನ ಗುರುಗಳು. ಇಲ್ಲಿ ಅವರು ಹೋಮ ಮಾಡುತ್ತಿದ್ದರು. ಅವರ ಮಹಿಮೆಯಿಂದ ಈ ವೇದಿಯು ಹೇಗೆ ಬೆಳಗುತ್ತಿದೆ ನೋಡು. ಅವರ ಮತ್ತವರ ಶಿಷ್ಯರ ಶ್ರಮದ ಬಿಂದುಗಳಿಂದ ರಾತ್ರಿ ಬೆಳಗಾಗುವುದರೊಳಗೆ ಅರಳಿದ "ಘರ್ಮಜಾನಿ ಕುಸುಮಾನಿ(ಕುಸುಮಗಳು)” ಮತಂಗವನದ ತುಂಬ ಸುಗಂಧ ಬೀರುತ್ತಿವೆ. ಉಪವಾಸಾದಿಗಳಿಂದ ಬಳಲಿದ್ದ ಮತಂಗ ಮಹರ್ಷಿಗಳು ಸಮುದ್ರ ಸ್ನಾನಕ್ಕೆ ಹೋಗುವ ಶಕ್ತಿಯಿಲ್ಲದಾಗ ಸಪ್ತ ಸಮುದ್ರಗಳೇ ಇಲ್ಲಿ ಬರುತ್ತಿದ್ದವು. ಅವರು ಒಣಗ ಹಾಕಿದ ನಾರುಮಡಿ, ಅವರು ದೇವರಿಗೇರಿಸಿದ ಹೂಗಳು ಹೇಗೆ ಇನ್ನೂ ಹೊಚ್ಚ ಹೊಸದಾಗಿವೆ ನೋಡು.! ಆದರೆ ಅವರಿಲ್ಲ.. ಅವರ ನೆನಪು ಮಾತ್ರ..."
ಹೇಳುತ್ತ ಹೋದಂತೆ ದುಃಖ ಭರದಿಂದ ಗದ್ಗದಿತಳಾದಳು.

ಕ್ಷಣ ಸಾವರಿಸಿಕೊಂಡು ವೃದ್ಧ ತಾಪಸಿ ಬೇಡಿದಳು: " ಶ್ರೀರಾಮ, ಇನ್ನು ನನಗೆ ದೇಹ ತ್ಯಾಗ ಮಾಡುವುದಕ್ಕೆ ಅಪ್ಪಣೆ ಕೊಡು. ಮತಂಗ ಋಷಿಗಳ ಸಾನ್ನಿಧ್ಯವನ್ನು ಸೇರಿಕೊಳ್ಳಬೇಕೆಂದಿದ್ದೇನೆ.”
ಆಗ ರಾಮ "ಆಗಲಿ ಹೋಗು ಸೇರು. ಧರ್ಮಚಾರಿಣಿ, ನಿನ್ನ ಶ್ರದ್ಧೆ ನಿರೀಕ್ಷೆಗಳ ಅಜರಾಮರ! ನನ್ನನ್ನು ಭಕ್ತಿಯಿಂದ ಅರ್ಚಿಸಿದ್ದೀಯೆ. ಸೋಲದ ನಿನ್ನ ಕಾಯುವಿಕೆಗೆ ಮಿಗಿಲಾದ ಕಾಯಕವ ನಾ ಕಾಣೆ. ನಿನಗೆ ಸದ್ಗತಿಯಾಗಲಿ" ಎಂದು ನುಡಿಯುತ್ತಿದ್ದಂತೆ ಶಬರಿಯು ನಿಗಿ ನಿಗಿ ಉರಿಯುತ್ತಿರುವ ಹೋಮ ಕುಂಡದಲ್ಲಿ ಹಾರಿ ತನ್ನ ಶರೀರವನ್ನು ಅಗ್ನಿದೇವನಿಗೆ ಸಮರ್ಪಿಸಿದಳು. ಮಿಂಚಿನಂತೆ ಕಂಗೊಳಿಸುವ ದಿವ್ಯ ದೇಹ ಧಾರಿಣಿಯಾಗಿ ಮುಕ್ತಿಪದ ಸೇರಿದಳು.
ಶಬರಿಯ ಅಮೋಘ ತಪಸ್ಸು ಮತ್ತು ದಿವ್ಯ ಜೀವನವನ್ನು ಮೆಲುಕು ಹಾಕುತ್ತ ರಾಮ ಲಕ್ಷ್ಮಣರು ತಮ್ಮ ಪ್ರಯಾಣವನ್ನು ಮುಂದುವರಿಸಿದರು.

Name : ವನರಾಗ ಶರ್ಮಾ ವನರಾಗ ಶರ್ಮಾ
Mobile no : +91-999999999
Write Comments
*Name :
*Comment :
(Max.1000 Characters)
  
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited